Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja > ಕತೆಯಾದವಳು…

ಕತೆಯಾದವಳು…

ವನಿಗೂ ಸರಿಯಾಗಿ ಗೊತ್ತಿರಲಿಲ್ಲ, ಅವನೇಕೆ ಬರೆಯುತ್ತಾನೆಂದು. ಕೆಲವೊಮ್ಮೆ ದುಃಖಕ್ಕೆ, ಯಾರದೋ ಮೇಲಿನ ಸಿಟ್ಟಿಗೆ, ತೀರಾ ಹತಾಶನಾದಾಗ, ಒಳಗಿನ ತುಡಿತವನ್ನು ತಡೆಯಲಾಗದೆ, ಅವಮಾನ, ಅಸಹಾಯಕ ಸ್ಥಿತಿಗಳು ಅವನನ್ನು ಬರವಣಿಗೆಗೆ ನೂಕಿತ್ತೆನ್ನಬಹುದು. ಅದೆಷ್ಟೇ ಪ್ರಯತ್ನಪಟ್ಟರೂ ಅವನ ಬರವಣಿಗೆಯಲ್ಲಿ ಅವನ ವೈಯಕ್ತಿಕ ಬದುಕಿನ ನೆರಳಿನ ತುಣುಕುಗಳು ಗೋಚರವಾಗುವುದನ್ನು ತಪ್ಪಿಸಲು ಸೋಲುತ್ತಲೇ ಇದ್ದ. ಇಲ್ಲಿ ಕತೆ ಲೇಖಕನದ್ದೋ ಅಥವಾ ಕತೆಯೇ ಲೇಖಕನ ಮೇಲೆ ಹಿಡಿತ ಸಾಧಿಸಿ ಬರೆಸಿಕೊಳ್ಳುತ್ತಿತ್ತೊ ನಿಖರವಾಗಿ ಹೇಳುವುದು ಕಷ್ಟ. ಬರವಣಿಗೆ ಖಾಸಗಿತನಕ್ಕೆ ಸಂಬಂಧಿಸಿದ್ದಾ? ಖಾಸಗಿ ಬದುಕಿಗೆ ಸಂಬಂಧಿಸಿದ್ದೇ ಆದಲ್ಲಿ ಬರವಣಿಗೆಗೇಕೆ ಮುದ್ರಣ? ಈ ಕತೆಯನ್ನು ಜನ ಓದುತ್ತಾರೆಂದು ಲೇಖಕ ತನ್ನೊಳಗಿನ ವಾಸ್ತವವನ್ನು ಅದುಮಿಟ್ಟುಕೊಂಡು ಮತ್ತೇನನ್ನೋ ಪ್ರದರ್ಶಿಸುವ ಪ್ರಯತ್ನ ಮಾಡುವನೇ? ಈಗ ಬರೆಯುತ್ತಿರುವುದು ನಾನಾ? ಅಥವಾ…

writeಸಮಯ ರಾತ್ರಿ 11:30 ಎಂದು ಗಡಿಯಾರ ಹೇಳುತ್ತಿತ್ತು. ಟೇಬಲ್ ಲ್ಯಾಂಪ್ ಉರಿಯುತ್ತಲೇ ಇತ್ತು. ಕತೆಯು ಕೊನೆಯ ಭಾಗ ಬರೆಸಿಕೊಳ್ಳದೆ ರಚ್ಚೆ ಹಿಡಿದ ಮಕ್ಕಳಂತೆ ಹಠ ಮಾಡುತ್ತಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಲುಗಳು ದಾರಿ ತಪ್ಪುತ್ತಿದ್ದವು. ಅವನು ಸಹನೆ ಕಳೆದುಕೊಂಡ, ಕತೆಯ ಅಂಗಿ ಪಟ್ಟಿಯನ್ನು ಹಿಡಿದು ಒಮ್ಮೆ ಥಳಿಸಿ ಬಿಡುವಷ್ಟು ಕೋಪ ಬಂತು ಅವನಿಗೆ, ಕೋಪವನ್ನು ತಡೆದುಕೊಂಡು ಮತ್ತೊಮ್ಮೆ ಕತೆಯನ್ನು ರಮಿಸಲು ಶುರುವಿಟ್ಟ, ಅಲಂಕಾರದ ಮೊರೆ ಹೋದ, ಕತೆಯ ಸೌಂದರ್ಯವನ್ನು ಹೆಚ್ಚಿಸುವ ಆಮಿಷವನ್ನೊಡ್ಡಿದರೂ ಉಪಯೋಗವಾಗಲಿಲ್ಲ. ಇದ್ಯಾಕೋ ಇದು ಅವನ ಪ್ರತಿಷ್ಠೆಯ ಸವಾಲೆಂದೆನಿಸಿತು. ತನ್ನ ಮಾತು ಕೇಳಿದರೆ ಓದುಗರು ನಿನ್ನನ್ನು ಅಪ್ಪಿ ಮುದ್ದಾಡುವರು, ಅವರ ಮನೆಯ ಶೋಕೇಸಿನಲ್ಲಿ ನಿನಗೆ ಜಾಗ ಕೊಡುವರು, ವಿಮರ್ಶಕರಿಂದ ಹೊಗಳಿಕೊಳ್ಳುವ ಸೌಭಾಗ್ಯ ನಿನ್ನದಾಗುತ್ತದೆ ಎಂದು ಕತೆಯ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಿದ, ಕತೆಯ ಮುಖದ ಮೇಲೆ ಕೋಪ ಮಿಶ್ರಿತ ಅಸಹನೆಯ ಗೆರೆಗಳು ನಿಶ್ಚಳವಾಗಿ ಕಾಣುತ್ತಿದ್ದವು. ಪ್ರಶಸ್ತಿಗಳು ನಿನ್ನ ಮುಡಿಗೇರುತ್ತವೆ. ಮುಂದೊಂದು ದಿನ ಶಾಲಾ-ಕಾಲೇಜಿನ ಪಠ್ಯವನ್ನು ಅಲಂಕರಿಸುವ ಸಾಧ್ಯತೆಗಳಿವೆ ಎಂದು ಕತೆಯನ್ನು ಸವರುತ್ತಾ ಸೋಗಿನಿಂದ ಹುಸಿ ಪ್ರೀತಿಯನ್ನು ತೋರಿಸಿದ. ಕತೆ ಅವನಿಂದ ಕೊಸರಿಕೊಂಡು ವ್ಯಂಗ್ಯವಾಗಿ ನಗಲಾರಂಭಿಸಿತು. ಇನ್ನೂ ಜೋರಾಗಿ ಗಹಗಹಿಸಿ ನಗುತ್ತಿತ್ತು. ಅವನು ಮಾತನಾಡಲಿಲ್ಲ. ಕತೆ ನಗು ನಿಲ್ಲಿಸುತ್ತಾ ಅವನತ್ತ ಒಂದು ಅಸಹ್ಯದ ನೋಟ ಬೀರಿ ಮಾತು ಮುಂದುವರೆಸಿತು. ನಾನು ನಿನ್ನ ಮಾತು ಕೇಳಬೇಕೆ? ನಾನು ಕತೆ, ಕತೆ ಯಾವಾಗಲೂ ಜೀವಂತ. ನನ್ನನ್ನು ನನ್ನಂತೆಯೇ ಜಗತ್ತಿಗೆ ಪರಿಚಯಿಸುವ ಅಲ್ಪ ಕೆಲಸವಷ್ಟೆ ನಿನ್ನದು, ಅದಕ್ಕಾಗಿ ನಾನು ನಿನಗೆ ಯಾವಾಗಲೂ ಋಣಿ. ಬರೆಯಿಸಿಕೊಳ್ಳದ ಕತೆಗಿಂತ ಸುಂದರವಾದ ಕತೆ ಮತ್ತೊಂದಿಲ್ಲ ಆದರೆ ಬರೆಯಿಸಿಕೊಳ್ಳದೆ ನನ್ನ ಸೌಂದರ್ಯವನ್ನು ಓದುಗ ಅನುಭವಿಸುದು ಅಸಾಧ್ಯ. ಇಲ್ಲಿ ಲೇಖಕ ಕೇವಲ ನಿಮಿತ್ತ ಎನ್ನುವ ಸತ್ಯವನ್ನು ನೀನು ಅರಗಿಸಿಕೊಳ್ಳಲೇ ಬೇಕು. ಲೆಕ್ಕವಿಲ್ಲದಷ್ಟು ಸುಂದರ ಜನಪದ ಕತೆಗಳಿಗೆ ಲೇಖಕನ ಹಂಗೇ ಇಲ್ಲ. ನಾನು ಹೀಗೆ ಇರಬೇಕೆಂದು ನನಗೂ ಆಸೆ ಇದೆ. ನನ್ನ ನಿಯಮದಂತೆ ನನ್ನನ್ನು ಬಿಟ್ಟು ಬಿಡು. ನನಗೆ ಯಾವ ವಿಮರ್ಶಕರ ಹೊಗಳಿಕೆಯೂ ಬೇಡ. ನನ್ನತನವೇ ನನಗೆ ಪ್ರಶಸ್ತಿಯ ಗರಿ.

                                                                                                                     ~~~~~~~

ವರ್ಷಗಳಿಂದ ಅವನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಅವಳೂ ಇವನನ್ನು ಪ್ರೀತಿಸುತ್ತಿದ್ದಳಂತೆ. ಇಬ್ಬರ ನಡುವೆ ಸರಿ ಸಮಾನ ಸಂಖ್ಯೆಯಲ್ಲಿ ಸರಸ ವಿರಸಗಳಾಗಿವೆ. ಅವನ ಬದುಕಿನ ಅಸ್ಪಷ್ಟತೆ, ಆಷ್ಟಾಗಿ ಕಾಸು ಹುಟ್ಟಿಸದ ಅವನ ಕತೆಗಳು, ಭೌತಿಕ ಜಗತ್ತಿನೆಡೆಗಿರುವ ಅವನ ದಿವ್ಯ ನಿರ್ಲಕ್ಷ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಅವಳು ಕಂಡ ಕನಸಿನ ಹುಡುಗ ಅವನಲ್ಲಿ ಕಾಣಿಸಲಿಲ್ಲ. ಅಯ್ಯೋ ಅದ್ಯಾವುದೊ ಅವಸರಕ್ಕೆ ಬಿದ್ದು ಇವನನ್ನು ಪ್ರೀತಿಸಿ ಬಿಟ್ಟೆನಲ್ಲಾ ಎಂದು ಕೊರಗಿದ್ದಾಳೆ. ಇತರೆ ಹುಡುಗರಂತೆ ಚುರುಕಾಗಿ, ಒಂದೊಳ್ಳೆ ಸಂಬಳದ ಕೆಲಸ ಹಿಡಿದು, ಬಿಂದಾಸ್ ಸುತ್ತುತ್ತಾ, ತನ್ನ ಇತರೆ ಗೆಳತಿಯರಿಗೆ ಅಸೂಯೆ ಹುಟ್ಟಿಸುವಂತೆ ಬದುಕಬೇಕೆಂಬ ಕನಸುಗಳು ಕಮರುವ ಸೂಚನೆಗಳೇ ಹೆಚ್ಚಾಗಿ ಕಾಣುತ್ತಿದ್ದವು. ಅಷ್ಟು ಸುಲಭವಾಗಿ ಅವನನ್ನು ಬಿಡುವುದೂ ಅವಳಿಂದ ಸಾಧ್ಯವಿರಲಿಲ್ಲ. ಇವುಗಳೆಲ್ಲವುಗಳ ನಡುವೆ ಅವಳಿಗೆ ಇನೊಂದು ಹೊಸ ಪರಿಚಯ ಆಪ್ತವಾಯಿತು, ಪರಿಚಯ ಸಂಬಂಧವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೊಸ ಪ್ರೀತಿ ಹಳೆಯದನ್ನು ಇಷ್ಟಿಷ್ಟೇ ಮರೆಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ಹಳೆಯ ಹುಡುಗನ ನೆನಪು ಅವಳೊಳಗೆ ತಪ್ಪಿತಸ್ಥ ಭಾವನೆ ಮೂಡಿಸುತ್ತಿತ್ತು. ಅದೊಂದು ದಿನ ಅವನಿಗೆ ಅವಳ ಹೊಸ ಪ್ರೀತಿಯ ಕತೆ ಗೊತ್ತಾಗಿತ್ತು. ಅದನ್ನೇ ಅವನು ಕತೆಯಾಗಿಸಿದ. ಅವಳನ್ನು ಕಳೆದುಕೊಂಡ ದುಃಖದಿಂದಲೋ, ತಾನು ಅವಳ ಕಣ್ಣಲ್ಲಿ ತಿರಸ್ಕøತನಾದೆನಲ್ಲಾ ಎನ್ನುವ ಕೀಳಿರಿಮೆಯಿಂದಲೋ ಏನೋ ಕತೆಯಲ್ಲಿ ಅವಳನ್ನು ಕೆಟ್ಟ ಹುಡುಗಿಯಂತೆ ಚಿತ್ರಿಸುವುದಕ್ಕೆ ನಿರ್ಧರಿಸಿದ್ದ. ಆ ಹುಡುಗನನ್ನು ಅಷ್ಟೇನು ಸುಂದರನಲ್ಲದ, ಮೋಸ ಮಾಡುವ ಶೋಕಿಲಾಲನಂತೆÀ ತೋರಿಸಲು ಹವಣಿಸುತ್ತಿದ್ದ. ತಾನು ಮಾತ್ರ ತುಂಬಾ ಒಳ್ಳೆಯವನು, ತನ್ನ ಪ್ರೀತಿ ಪವಿತ್ರವಾದದ್ದು, ವಿಧಿ ತನ್ನ ಜೊತೆ ಕಠೋರವಾಗಿದೆ ಎಂದು ಬರೆಯಲೆತ್ನಿಸಿದ. ಅದರಿಂದ ದಕ್ಕುವ ಕೊಂಚ ಸಮಾಧಾನಕ್ಕೆ ಅವನ ಮನಸ್ಸು ಹಾತೊರೆಯುತ್ತಿತ್ತು. ವರ್ಷಗಳ ಕಾಲ ಪ್ರೀತಿಸಿದ್ದ ಹುಡುಗಿಯನ್ನು ಕೆಟ್ಟದಾಗಿ ಬಿಂಬಿಸಲು ಕಷ್ಟವೆನಿಸಿದರೂ ಹೇಳಿಕೊಳ್ಳದೆ ತನ್ನೊಳಗೆ ಅದನ್ನು ಮುಚ್ಚಿಟ್ಟುಕೊಳ್ಳುವುದೂ ಮತ್ತೊಷ್ಟು ಅಪಾಯಕಾರಿ ಎಂದೆನಿಸಿತ್ತು ಆದರೆ ಕತೆಯನ್ನು ಪಳಗಿಸಲಾಗಲಿಲ್ಲ.
ಸಿಗರೇಟ್ ಹಚ್ಚಿ ಕಿಟಕಿಯಾಚೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯನ್ನೇ ನೋಡುತ್ತಾ ನಿಂತ. ಅವಳ ಜೊತೆ ಸೋನೆ ಮಳೆಯಲ್ಲಿ ಹೆಜ್ಜೆ ಹಾಕಿದ್ದು, ಆ ಬೆಚ್ಚನೆಯ ಅಪ್ಪುಗೆ, ಲೆಕ್ಕವಿಲ್ಲದಷ್ಟು ಮುತ್ತುಗಳು, ತಾಸುಗಟ್ಟಲೆ ಅದೇನೇನೋ ಮಾತನಾಡಿದ್ದು ಸವಿ ನೆನಪುಗಳ ಸಾಲು ಒಂದೆಡೆಯಾದರೆ, ಅದಕ್ಕೆ ತದ್ವಿರುದ್ದವಾಗಿ ಅದೆಷ್ಟು ಮನಸ್ತಾಪಗಳು, ಸಂಬಂಧದಲ್ಲಿನ ಅಭದ್ರತೆಯ ಭಾವನೆ, ಅವಳ ಐಶಾರಾಮಿ ಜೀವನ ಶೈಲಿ ಇವನಲ್ಲಿ ಹುಟ್ಟಿಸುತ್ತಿದ್ದ ಪೊಸೆಸ್ಸಿವ್ನೆಸ್, ಮುಗಿಯದ ಕಿತ್ತಾಟಗಳು, ಇಬ್ಬರ ನೆಮ್ಮದಿಗೂ ಬೆಂಕಿ ಹಚ್ಚಿದ್ದವು. ಆ ದಿನಗಳು ತುಸು ಮುಜುಗರ ತರುವಂತಿದ್ದವು.  ಮೊನ್ನೆ ಪಕ್ಕದ ಬೀದಿಯ ಹೆಂಗಸೊಬ್ಬಳು ಯುವಕನ ಜೊತೆ ಲವ್ವಿ ಡವ್ವಿಯಲ್ಲಿದ್ದಾಳೆಂದು ರಾದ್ಧಾಂತಗಳಾದವು. ಅವಳಿಗಾಗಲೆ ಮದುವೆಯಾಗಿ ಎರಡು ಪುಟ್ಟ ಮಕ್ಕಳಿವೆ ಆದರು ಅವಳಿಗೆ ಬೇಕಿತ್ತಾ ಇವೆಲ್ಲಾ ಎಂದು ತರಾಟೆಗೆ ತೆಗೆದುಕೊಂಡರು. ‘ಐಯಾಮ್ ಇನ್ ಲವ್ ವಿತ್ ಹಿಮ್’ ಎಂದಳಾಕೆ. ಇಲ್ಲಿ ವಿವಾಹಿತರು, ಹೆಣ್ಣು, ಗಂಡು, ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಪ್ರೀತಿಯಲ್ಲಿ ಬೀಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರೀತಿ ತೀರಾ ಮೂಲಭೂತಗಳಲ್ಲೊಂದು. ನಾವು ಸಂಬಂಧಗಳಿಗೆ ಕಟ್ಟು ಬಿದ್ದಿದ್ದೇವೆ, ಸಂಬಂಧಗಳು ಸುಲಭವಾಗಿ ಕಳಚಿ ಹೋಗುವುದಿಲ್ಲವೆಂಬ ಹುಂಬು ವಿಶ್ವಾಸದಲ್ಲಿ ಪ್ರೀತಿಯ ತೋರ್ಪಡಿಕೆಯ ಜಿಪುಣತನದಿಂದಾಗಿ ಪ್ರೀತಿಯನ್ನರಸಿ ಸಂಬಂಧಗಳು ಹೊಸ್ತಿಲು ದಾಟುತ್ತಿವೆ. ನೈತಿಕ, ಅನೈತಿಕ, ನಾಗರೀಕತೆಗಳೆಂಬ ಪದಗಳ ಪ್ರಯೋಗಿಸಿ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಯತ್ನಗಳಲ್ಲಿದ್ದೇವಷ್ಟೆ. ಸಿಗರೇಟ್ ಮುಗಿಯುವುದರೊಳಗೆ ಹೀಗೆ ಅನೇಕ ಆಲೋಚನೆಗಳು ಅವನೆದುರು ಸರಿದು ಹೋದವು.

ತನ್ನ ಬಾಲ್ಕಾನಿಗೆ ಬಂದು ನಿಂತ, ಮಳೆ ಕಡಿಮೆಯಾಗಿತ್ತು. ಮಳೆಯಲ್ಲಿ ತೋಯ್ದು ಯುವ ಇಂಜಿನಿಯರ್ ಒಬ್ಬ ಆಗ ತಾನೆ ಮನೆ ಸೇರುತಿದ್ದ. ಮಳೆ ಹನಿಗಳನ್ನೊತ್ತ ಮರದ ಎಲೆಗಳು ಗಾಳಿ ಬಂದಾಗೆಲ್ಲಾ ಕಂತಿನಲ್ಲಿ ತಂಪೆರಗುತಿದ್ದವು. ಬೀದಿ ದೀಪದ ಬೆಳಕಿಗೆ ಎಲೆಯ ಮೇಲಿನ ಹನಿಗಳು ಮಿನುಗುತ್ತಿದ್ದವು. ಮಳೆಗೆ ಪೂರ್ತಿಯಾಗಿ ಒದ್ದೆಯಾದ ಬೆಕ್ಕಿನ ಮರಿಯೊಂದು ನಡುಗುತ್ತಾ ಮೂಲೆಯಲ್ಲಿ ಅನಾಥವಾಗಿ ನಿಂತಿತ್ತು. ಆ ಬೆಕ್ಕಿನ ಮರಿಗೂ ಅವನಿಗೂ ಅಂತಹ ವ್ಯತ್ಯಾಸವೇನು ಕಾಣಲಿಲ್ಲ. ದೂರದ ಅಪಾರ್ಟಮೆಂಟ್‍ನ ಮಹಡಿಗಳಲ್ಲಿನ ಅಲ್ಲಲ್ಲಿ ಪ್ರಕಾಶಮಾನವಾದ ದೀಪ ಉರಿಯುತ್ತಿದ್ದವು. ಅಲ್ಲಿ ಯಾರ್ಯಾರ ಮನೆಯ ಕತೆಗಳೇನೊ? ಅದೆಷ್ಟು ಜೋಡಿಗಳ ನಡುವೆ ಈಗಾಗಲೆ ಪ್ರೀತಿ ಕರಗಿ ಹೋಗಿದೆಯೋ? ಕೇವಲ ದೇಹಕ್ಕೆ ಮಾತ್ರ ಮಿಸಲಾಗಿರುವ ಅದೆಷ್ಟೋ ಪ್ರೀತಿಗಳಿಗೆ ಆ ಐಶಾರಾಮಿ ಕಟ್ಟಡ ಸಾಕ್ಷಿಯಾದಂತೆನಿಸಿತು. ತೀವ್ರವಾದ ಪ್ರೀತಿ ಅಲ್ಲೂ ಇರಬಹುದು ಕೂಡ ಆದರೆ ಪ್ರೀತಿಯ ರೂಪಕ್ಕೆ ಖಾತರಿ ಕೊಡುವುದು ಸುಲಭದ ಮಾತಲ್ಲ. ಆಸ್ತಿಕನ ದೇವರಂತೆಯೇ ಈ ಪ್ರೀತಿ. ಅದರದ್ದೇ ಸ್ವಂತ ರೂಪವಂತೂ ಇಲ್ಲ. ಸಮಯಕ್ಕೆ, ವಯಸ್ಸಿಗೆ, ಮನಸ್ಥಿತಿಗೆ ಅನುಗುಣವಾಗಿ ಪ್ರೀತಿ ತನ್ನ ರೂಪ ಪಡೆದುಕೊಳ್ಳುತ್ತಿದೆ. ಯಾರ ಮನಸ್ಸಿನ ಮೂಲೆಯಲ್ಲಿ ಅದ್ಯಾರ ನೆನಪು ಕಾಡಿದ್ದಾವೋ? ಎಷ್ಟು ಮನೆಗಳಲ್ಲಿ ಪ್ರೀತಿ ಕೇವಲ ಹಾಸಿಗೆಯಲ್ಲೆ ಹುಟ್ಟಿ ಹಾಸಿಗೆಯಲ್ಲೆ ಸತ್ತಿದೆಯೋ ಬಲ್ಲಬರಾರು? ಕಾಲ ಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೆಷ್ಟೋ ಆದರೂ ಸಮಾಜದ ಮುಂದೆ ಆದರ್ಶ ದಂಪತಿಗಳಂತೆಯೆ ಬದುಕಿದ್ದಾರೆ. ಘನತೆ, ಗೌರವದ ನೆಪದಲ್ಲಿ, ಮಕ್ಕಳ ಮುಖ ನೋಡಿಕೊಂಡು ಬದುಕಬೇಕಲ್ಲಾ ಎಂಬ ಅನಿವಾರ್ಯತೆನ್ನು ವ್ಯಕ್ತಪಡಿಸಿದ್ದಾರೆ. ಕೆಲವರಿಗಂತೂ ಮಕ್ಕಳು ತಾವೇ ಮಾಡಿಕೊಂಡ ತಪ್ಪುಗಳಂತೆ ಕಂಡಿವೆ. ಗೋಡೆಗಳಿಗೆ, ಹಾಸಿಗೆ, ಮಂಚಗಳಿಗೆ ಕಿವಿ, ಕಣ್ಣುಗಳಿದ್ದಿದ್ದರೆ ಅದೆಷ್ಟು ಕಲಹಗಳಾಗುತ್ತಿದ್ದವೋ? ಅಥವಾ ಯಾವುದನ್ನೂ ಮುಚ್ಚಿಡುವ ಅಗತ್ಯವಿರದೆ ಯಾರಿಗೂ ಮೋಸ, ಪಾಪಪ್ರಜ್ಞೆ ಕಾಡುತ್ತಿರಲಿಲ್ಲ. ಸಭ್ಯರಂತೆ ಕಾಣುವ ಎಲ್ಲರೂ ಹಾಸಿಗೆಯ ಮೇಲೆ ಪ್ರಾಣಿಗಳೇ, ಹೊರಾಂಗಣದಲ್ಲಿದ್ದ ಆಟವನ್ನು ಒಳಾಂಗಣಕ್ಕೆ ಸ್ಥಳಾಂತರಿಸಿದ್ದೇವಷ್ಟೆ. ಕಾಲ ಕಾಲಕ್ಕೆ ಉಡುಗೆ ತೊಡುಗೆಗಳು ಬದಲಾಗುತ್ತಾ ಬಂದಿವೆ ಆದರೆ ಬೆತ್ತಲೆ ಮಾತ್ರ ಶಾಶ್ವತವಾಗಿ ಹಾಗೇ ಉಳಿದಿದೆ. ನೂರೆಂಟು ಬೇಕು ಬೇಡದ ಯೋಚನೆಗಳು ಅವನೊಳಗೆ ಸುತ್ತುತ್ತಿದ್ದವು.
ಒಳನಡೆದ, ಮುಗಿಯದ ಕತೆ ಟೇಬಲ್ ಮೇಲೆ ಪುಟ್ಟ ಮಗುವಂತೆ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಆ ಕತೆಗೆ ತಾರ್ಕಿಕ ಅಂತ್ಯ ನೀಡಲಾಗದೆ, ಮುಂದುವರಿಸಲೂ ಆಗದೆ ಸೋತು ಕುಳಿತ. ಅವಳ ನೆನಪು ಮತ್ತೆ ಮತ್ತೆ ಕಣ್ಣೀರಿನ ರೂಪದಲ್ಲಿ ಬಂದು ಹೋಗುತ್ತಿತ್ತು.

ಶ್ರೀಕಾಂತ್ ಎನ್ ಎಸ್
9008346361

Tags: , , , ,

Leave a Reply