Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja > ಸ್ಫೂರ್ತಿ ತುಂಬಿದ ಸನ್ಯಾಸಿ!

ಸ್ಫೂರ್ತಿ ತುಂಬಿದ ಸನ್ಯಾಸಿ!

ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತವನ್ನು ಕುರಿತಂತೆ ಜಾಗತಿಕ ಅಭಿಪ್ರಾಯಗಳು ಶ್ರೇಷ್ಠವಾದುದೇನಾಗಿರಲೆಲ್ಲ. ‘ಸಿರಿವಂತ ಅನಾಗರಿಕ ರಾಷ್ಟ್ರ’ವೆಂದಷ್ಟೇ ಜಗತ್ತು ಭಾರತವನ್ನು ಭಾವಿಸಿತ್ತು. ಭಾರತಕ್ಕೆ ದಾಂಗುಡಿ ಇಟ್ಟು ಮತಾಂತರದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದ ಕ್ರೈಸ್ತ ಪಾದ್ರಿಗಳು ತಮ್ಮ ಖರ್ಚಿಗಾಗಿ ಹಣಗಳಿಸಲು ಈ ರೀತಿ ಸುಳ್ಳು ಪ್ರಚಾರಗಳನ್ನೂ ಮಾಡಿದ್ದರು. ನಾಗರಿಕತೆಯ ಅರಿವೇ ಇಲ್ಲದ ನಾಡಿಗೆ ಜ್ಞಾನದ ಹೊಳೆ ಹರಿಸಲು ಹೊರಟಿದ್ದೇವೆಂದು ಪಶ್ಚಿಮದ ಸಿರಿವಂತರನ್ನು ನಂಬಿಸಿಬಿಟ್ಟಿದ್ದರು. ಅದಕ್ಕೆ ಪೂರಕವಾಗಿ ಇಲ್ಲಿನ ಕೆಲವರನ್ನು ಆಯ್ದು ನಮ್ಮ ಅಜ್ಞಾನದ ಕುರಿತಂತೆ ಭಾಷಣವನ್ನು ಮಾಡಿಸಲಾಗುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು ಅಂತಹ ಭಾರತೀಯರನ್ನು ಹುಡುಕೆ ಅವರಿಗೆ ಬಿರುದು-ಬಾವಲಿಗಳನ್ನಿತ್ತು ವಿದೇಶಕ್ಕೆ ವಿಶೇಷ ಅತಿಥಿಗಳನ್ನಾಗಿ ಕಳಿಸುತ್ತಿದ್ದರು. ಒಟ್ಟಾರೆ ಭಾರತವನ್ನು ತಾವು ಆಳುತ್ತಿರುವುದು ತಮ್ಮ ಲಾಭಕ್ಕಾಗಿಯಲ್ಲ, ಸ್ವತಃ ಭಾರತೀಯರ ಉದ್ಧಾರಕ್ಕಾಗಿ ಎಂದು ಜಗತ್ತನ್ನೇ ನಂಬಿಸಿಬಿಟ್ಟಿದ್ದರು. SWAMIJI CHICAGO [1893]ಈ ದುಷ್ಟ್ರಭಾವದಿಂದ ಅಮೆರಿಕ ಮತ್ತು ಯೂರೋಪಿ ಬುದ್ಧಿವಂತರನ್ನು ಹೊರಗೆಳೆಯುವ ಮೊದಲ ಯಶಸ್ವೀ ಸಾಹಸ ಮಾಡಿದ್ದು ಸ್ವಾಮಿ ವಿವೇಕಾನದರೇ. ಅದಕ್ಕೂ ಮುನ್ನ ಭಾರತದಲ್ಲಿ ಆಂತರಿಕ ಶುದ್ಧಿಯ ಕೆಲಸಗಳು ಶುರುವಾಗಿದ್ದರೂ ಅದು ವಿಧೇಶದ ನೆಲ ತಾಕಿರಲಿಲ್ಲ. ಈಗ ಮೂವತ್ತರ ಹರೆಯದ ಸಂನ್ಯಾಸಿ ಅಮೆರಿಕ-ಯೂರೋಪಿನ ಕದವನ್ನು ಅಪ್ಪಟ ಭಾರತೀಯನಾಗಿ ಬಡಿದಿದ್ದ. ಸ್ವಾಮಿ ವಿವೇಕಾನಂದರ ಚಿಕಾಗೋ ಸರ್ವಧರ್ಮಸಮ್ಮೇಳನದ ಮೊದಲ ಭಾಷಣ ಚೇತೋಹಾರಿಯಾಗಿತ್ತು. ಧರ್ಮವೆನ್ನುವುದು ಎಲ್ಲವನ್ನೂ ಅಪ್ಪಿಕೊಳ್ಳುವಂಥದ್ದೆಂಬ ಅವರ ವ್ಯಾಖ್ಯೆ ಈ ಹಿಂದಿನ ಬೇರೆಲ್ಲ ವ್ಯಾಖ್ಯೆಗಳಿಗಿಂತ ಭಿನ್ನವಾಗಿತ್ತು. ಇತರರನ್ನು ದೂಷಿಸದ, ತನ್ನದೇ ಶ್ರೇಷ್ಠವೆಂಬ ಅಹಂಕಾರವೂ ಇಲ್ಲದ, ಅಪಾರ ಅಧ್ಯಯನವುಳ್ಳ, ಅನುಪಮ ಅನುಭವಿಯಾದ ಈ ತರುಣನ ಮಾತಿಗೆ ಅಮೆರಿಕದ ಜನತೆ ಬೆಕ್ಕಸಬೆರಗಾದರು. ಅಲ್ಲಿನ ಪ್ರಮುಖ ಪತ್ರಿಕೆಗಳಾದ ‘ರುದರ್‍ಫೋರ್ದ್ ಅಮೆರಿಕನ್’, ‘ಪ್ರೆಸ್ ಆಫ್ ಅಮೆರಿಕ’, ‘ಇಂಟಿರಿಯರ್ ಚಿಕಾಗೊ’, ‘ಚಿಕಾಗೊ ಟ್ರಿಬ್ಯೂನ್’, ‘ಚಿಕಾಗೊ ಇಂಟರ್ ಓಸಿಯನ್’ ಮೊದಲಾದವು ಸ್ವಾಮಿಜೀಯವರ ಬಗ್ಗೆ ಧಾರಾಳವಾಗಿ ಬರೆದವು. ‘ನ್ಯೂಯಾರ್ಕ್ ಹೆರಾಲ್ಟ್’ ಪತ್ರಿಕೆಯಂತೂ ಅವರನ್ನೂ ‘ದೈವದತ್ತ ವಾಗ್ಮಿ’ ಎಂದು ಸ್ಫೂರ್ತಿ ತುಂಬಿದ ಸಂನ್ಯಾಸಿ!

 “ನಿಸ್ಸಂಶಯವಾಗಿಯೂ ಅವರು ಸಮ್ಮೇಳನದ ಅತಿಶ್ರೇಷ್ಠ ವ್ಯಕ್ತಿ. ಅವರ ಮಾತುಗಳನ್ನು ಕೇಳಿದ ಮೇಲೆ ‘ಇಂತಹ ತಿಳಿವಳಿಕಸ್ಥ ದೇಶಕ್ಕೆ ಧರ್ಮಪ್ರಚಾರಕರನ್ನು ಕಳಿಸುವುದು ಎಂತಹ ಮೂರ್ಖತನ!’ ಎನ್ನಿಸುತ್ತದೆ” ಎಂದಿತು.
ಹೌದು, ಪಶ್ಚಿಮಕ್ಕೆ ಈಗ ಪಾದ್ರಿಗಳ ಮಾತಿನಲ್ಲಿ ಅನುಮಾನ ಕಾಡಿತ್ತು. ಭಾರತೀಯರಿಗೆ ಧರ್ಮವಿಲ್ಲ, ಆರಾಧನೆಯ ಪರಂಪರೆಯಿಲ್ಲ ಎಂದೆಲ್ಲ ಅನುಮಾನ ಕಾಡಿತ್ತು. ಭಾರತೀಯರಿಗೆ ಧರ್ಮವಿಲ್ಲ, ಆರಧನೆಯ ಪರಂಪರೆಯಿಲ್ಲ ಎಂದೆಲ್ಲ ಹೇಳುತ್ತಿದ್ದುದು ನಿಜವಷ್ಟೇ. ಈಗ ಅದೇ ನಾಡಿನಿಂದ ಬಂದ ಓರ್ವ ಯುವ ಸಂನ್ಯಾಸಿ ತನ್ನ ಅಮೋಘ ಪಾಂಡಿತ್ಯದಿಂದ ಬುದ್ಧಿವಂತರುನ್ನು ತನ್ನ ತೆಕ್ಕೆಗೆಳೆದುಕೊಳ್ಳುತ್ತಲೇ ಸಾಗಿದ್ದ. ಕ್ರೈಸ್ತ ಮಿಶನರಿಗಳಿಗೆ ಹಣ ಹರಿದುಬರುವುದು ಕಡಮೆಯಾಯಿತು. ಸ್ವಾಮಿಜೀಯವರ ಸಮಾಕಾಲೀನ ಪ್ರಖರ ಚಿಂತಕ ಹೀರಮ್ ಮ್ಯಾಕ್ಸಿಮ್ ಇಪ್ಪತ್ತು ವರ್ಷಗಳ ನಂತರ ದಾಖಲಿಸಿದ: “ಚಿಕಾಗೋ ಸರ್ವಧರ್ಮ ಸಮ್ಮೇಳನದಿಂದಾಗಿ ಅಮೆರಿಕದ ಜನತೆಗೆ ಪ್ರತಿವರ್ಷವೂ ಹತ್ತುಲಕ್ಷ ಡಾಲರ್‍ಗೂ ಹೆಚ್ಚು ಹಣ ಉಳಿಯಿತು. ಇನ್ನು ವಿದೇಶಗಳಲ್ಲಿ ಅದು ಉಳಿಸಿದ ಎಷ್ಟೋ ಜೀವಗಳ ಕುರಿತಂತೆ ಹೇಳಬೇಕಾಗಿಯೇ ಇಲ್ಲ. ಇವೆಲ್ಲವೂ ಸಾಧ್ಯವಾದದ್ದು ಒಬ್ಬ ಧೀರ, ಪ್ರಾಮಾಣಿಕ ಮನುಷ್ಯನಿಂದ. ಅವನೇ ಕಲ್ಕತ್ತದಿಂದ ಬಂದಿದ್ದ ಸಂನ್ಯಾಸಿ, ವಿವೇಕಾನಂದ. ಈತನದು ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ. ಅಪರಿಮಿತ ಜ್ಞಾನ. ವೆಬ್‍ಸ್ಟರ್‍ನ ಪದವೀಧರನಂತೆ ಇಂಗ್ಲಿಷ್ ಮಾತನಾಡಬಲ್ಲವನು. ಸಮ್ಮೇಳನದಲ್ಲಿ ಇತರೆಲ್ಲ ಪ್ರತಿನಿಧಿಗಳಿಗಿಂತಲೂ ಅತಿಹೆಚ್ಚು ಸಂಖ್ಯೆಯಲ್ಲಿದ್ದ ಅಮೆರಿಕನ್ ಪ್ರಾಟೆಸ್ಟೆಂಟರು ತಮ್ಮ ಕೆಲಸ ಬಹಳ ಸುಲಭವಾಗಿರುತ್ತದೆಂದು ಮೊದಲು ಭಾವಿಸಿದ್ದರು. ‘ನಿನ್ನನ್ನು ಹೇಗೆ ನಿರ್ನಾಮ ಮಾಡುತ್ತೇನೆ ನೋಡುತ್ತಿರು!’ ಎಂಬ ಧೋರಣೆಯಿಂದ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಅವರ ಬಳಿಯಿದ್ದ ಸರಕೆಂದರೆ ಅದೇ ಚರ್ಮಿತಚರ್ವಣವಾದ ಗೊಡ್ಡು ಕಥೆಗಳು……
“ಆದರೆ ಯಾವಾಗ ವಿವೇಕಾನಂದರು ಮಾತನಾಡಿದರೋ, ಆಗ ಅವರಿಗೆ ಗೊತ್ತಾಯಿತು- ತಾವೊಬ್ಬ ನೆಪೋಲಿಯನ್‍ನನ್ನು ಎದುರಿಸಬೇಕಾಗಿದೆ, ಎಂದು. ವಿವೇಕಾನಂದರ ಪ್ರಥಮ ಭಾಷಣವೇ ಹೊಸ ದಿಗಂತವೊಂದನ್ನು ತೋರಿಸಿಕೊಟ್ಟಿತು. ಅವರಾಡಿದ ಪ್ರತಿಯೊಂದು ಪದವನ್ನೂ ವರದಿಗಾರರು ಎಚ್ಚರಿಕೆಯಿಂದ ಆಲಿಸಿ, ದೇಶದ ಮೂಲೆಮೂಲೆಯ ಸಾವಿರಾರು ಪತ್ರಿಕೆಗಳಗೆ ತಂತಿ ಮೂಲಕ ಕಳಿಸಿದರು. ವಿವೇಕಾನಂದರು ಅಂದಿನ ಸಿಂಹವಾದರು. ಶೀಘ್ರದಲ್ಲೇ ಅಸಂಖ್ಯ ಜನ ಅವರ ಹಿಂಬಾಲಕರಾದರು. ಅವರ ಭಾಷಣವನ್ನು ಕೇಳಲು ಬಂದ ಜನರಿಗೆ ಯಾವ ಸಭಾಂಗಣವೂ ಸಾಲುತ್ತಿರಲಿಲ್ಲ. ಅಮೆರಿಕದ ಕ್ರೈಸ್ತರು, ಏಷಿಯಾದ ಬಡ ‘ಅನಾಗರಿಕ’ನ ಆತ್ಮವನ್ನು ರಕ್ಷಿಸಲು ಲಕ್ಷಾಂತರ ಡಾಲರುಗಳನ್ನೂ ಅರೆಶಿಕ್ಷಿತ ಮೂರ್ಖರನ್ನೂ (ಧರ್ಮಪ್ರಚಾರಕರು) ಕಳಿಸಿಕೊಡುತ್ತಿದ್ದರು. ಇಂತಹ ‘ರಕ್ಷಣೆ’ಯಿಂದ ತಪ್ಪಿಸಿಕೊಂಡು ಉಳಿದಿದ್ದವನೊಬ್ಬನು (ಸ್ವಾಮಿ ವಿವೇಕಾನಂದರು) ಇಲ್ಲದ್ದ. ಅಮೆರಿಕದ ಎಲ್ಲ ಪಾದ್ರಿಗಳೂ ಪ್ರಚಾರಕರೂ ಒಟ್ಟಾರೆ ತಿಳಿದಿದ್ದುದಕ್ಕಿಂತ ಹೆಚ್ಚಿನ ಧರ್ಮವನ್ನೂ ತತ್ತ್ವಜ್ಞಾನವನ್ನೂ ಈತ ಬಲ್ಲವನಾಗಿದ್ದ. ಜನರಿಗೆ ನಿಜಕ್ಕೂ ಒಪ್ಪಿಗೆಯಾಗುವಂತಹ ರೀತಿಯಲ್ಲಿ ಪ್ರಥಮ ಬಾರಿಗೆ ಈತ ಧರ್ಮವನ್ನು ಬೋಧಿಸಿದ. ಜನರು ಎಂದು ಊಹಿಸಿರದಿದ್ದಷ್ಟು ಸತ್ತ್ವ ಅದರಲ್ಲಿತ್ತು. ಆ ಬಗ್ಗೆ ವಾದಕ್ಕೆ ಎಡೆಯೇ ಇರಲಿಲ್ಲ. ಬೆಕ್ಕು ಇಲಿಯೊಂದಿಗೆ ಆಟವಾಡುವಂತೆ ಈತ ಕ್ರೈಸ್ತ ಮಿಷನರಿಗಳೊಂದಿಗೆ ಆಡಿದ. ಅವರು ದಿಗ್ಭ್ರಾಂತರಾದರು. ಅವರಿಗೇನು ಮಾಡಲು ಸಾಧ್ಯವಿತ್ತು? ಅವರೇನು ಮಾಡಿದರು? ಅಂಥವರು ಯಾವಾಗಲೂ ಮಾಡುವುದನ್ನೇ ಮಾಡಿದರು – ಈತನನ್ನು ದೆವ್ವದ ಪ್ರತಿನಿಧಿಯೆಂದು ದೂಷಿಸಿದರು. ಆದರೆ ಆಗಬೆಕಾದದ್ದು ಆಗಿಹೋಗಿತ್ತು. ಬೀಜವನ್ನು ಬಿತ್ತಿಯಾಗಿತ್ತು. ಅಮೆರಿಕನ್ನರು ಚಿಂತಿಸಲಾರಂಭಿಸಿದ್ದರು. ಅವರು ತಮ್ಮಷ್ಟಕ್ಕೆ ಹೇಳಿಕೊಂಡರು: ‘ಇವನಂಹ ಜನರಿಗೆ ಬೋಧಿಸುವುದಕ್ಕಾಗಿ, ಇವನಿಗೆ ಹೋಲಿಸಿದರೆ ಧರ್ಮವನ್ನು ಏನೇನೂ ಅರಿಯದ ನಮ್ಮ ಮಿಷನರಿಗಳನ್ನು ಕಳಿಸಿ, ಹಣವನ್ನು ಪೋಲು ಮಾಡೋಣವೆ? ಎಂದಿಗೂ ಇಲ್ಲ!’ ತತ್ಪರಿಣಾಮವಾಗಿ, ಮಿಷನರಿಗಳ ಆದಾಯ ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್‍ಗಳಷ್ಟು ಕಡಮೆಯಾಯಿತು……”
ಪಾದ್ರಿಗಳನ್ನು ಎದುರುಹಾಕರಕೊಳ್ಳುವುದಕ್ಕೂ ಕ್ರಾಂತಿಕಾರ್ಯಕ್ಕೆ ಅಡಿಪಾಯ ಹಾಕುವುದಕ್ಕೂ ಸಂಬಂಧವೆಲ್ಲೆಯದೆಂಬ ಪ್ರಶ್ನೆ ಸಹಜ. ಪಶ್ಚಿಮ ವಿಸ್ತಾರಗೊಂಡದ್ದೇ ಹಾಗೆ. ಮೊದಲು ಸೈನ್ಯ ನುಗ್ಗುತ್ತದೆ, ಅದರ ಛಾಯೆಯೊಳಗೆ ಕ್ರೈಸ್ತ ಪಾದ್ರಿಗಳು. ಒಮ್ಮೆ ಆಯಾ ರಾಷ್ಟ್ರದ ಜನರ ಮತ ಪರಿವರ್ತಿಸಿಬಿಟ್ಟರೆ ಅವರು ಶಾಶ್ವತ ಗುಲಾಮರು! ಸ್ವಾಮೆ ವಿವೇಕಾನಂದರು ಈ ವಿಸ್ತಾರಕ್ಕೆ ತಡೆಗೋಡೆಯಾಗಿ ನಿಂತರು. ತಮ್ಮ, ವೇದಾಂತದ, ಭಾರತದ ಹಿತೈಷಿಗಳ ಸಂಖ್ಯೆಯನ್ನು ಹೆಚ್ಚಿಸುತ್ತ ನಡೆದರು. ತಮ್ಮ, ರಾಷ್ಟ್ರದ ಕುರಿತಾದ ಶ್ರೇಷ್ಠ ಸಂಗತಿಗಳನ್ನು ಸರಳ ವ್ಯಾಖ್ಯಾನಗಳ ಮೂಲಕ ಪಾಶ್ಚಾತ್ಯ ಸಮಾಜಕ್ಕೆ ತಲಪಿಸಿದರು. ಹಾಗೆ ನೋಡಿದರೆ ಸರ್ವಧರ್ಮಸಮ್ಮೇಳನ ಮುಗಿದೊಡನೆ ಸ್ವಾಮಿಜೀಯವರನ್ನು ಭಾರತೀಯರು ಅಮೆರಿಕಕ್ಕೆ ಕಳಿಸಿಕೊಟ್ಟ ಉದ್ದೇಶ ತೀರಿತ್ತು. ಆದರೆ ಸ್ವತಃ ಸ್ವಾಮಿಜೀಯವರ ಬಯಕೆ ತೀರಿರಲಿಲ್ಲ. ಅವರು ಹೊಸ ಹೊಸ ಗೆಳೆಯರನ್ನು ಸಂಪಾದಿಸಿದರು. ಪ್ರೊ.ರೈಟ್, ಇಂಗರ್‍ಸಾಲ್‍ರಂತಹ ಪಂಡಿತರ ಮನಸೂರೆಗೊಂಡರು. ಮೇಡಂ ಎಮ್ಮಾ ಕಾಲ್ವೆ, ರಾಕ್‍ಪೆಲ್‍ರಂತಹ ಸಿರಿವಂತ ಸಮಾಜದ ಕಣ್ಮಣಿಗಳ ಆದರಕ್ಕೆ ಪಾತ್ರರಾದರು. ಇದು ಭವಿಷ್ಯದ ಕ್ರಾಂತಿಕಾರ್ಯಕ್ಕೆ ಸಮರ್ಥವಾಗಿ ಭೂಮಿಯನ್ನು ಅಣಿಗೊಳಿಸಿತ್ತು.
ಭಾರತದಿಂದ ಮರಳಿ ಬರಲು ಬಹಳ ಒತ್ತಡವಿದ್ದಾಗ್ಯೂ ಸ್ವಾಮಿಜೀ ಮರಳಲಿಲ್ಲ. ಅವರಿಗೆ ಇಂಗ್ಲೆಂಡಿಗೆ ಹೋಗುವ ಬಯಕೆಯಿತ್ತು. ಹಾಗಂತ ಅಮೆರಿಕದಿಂದ ತ್ವರಿತವಾಗಿಯೂ ಧಾವಿಸಲಿಲ್ಲ. ಅಮೆರಿಕದಲ್ಲಿ ತಮ್ಮ ನೆಲೆಯನ್ನು ಭದ್ರಗೊಳಿಸಿಕೊಂಡು, ಅಮೆರಿಕದ ಬುದ್ಧಜೀವಿಗಳ ಅಪಾರ ಗೌರವಕ್ಕೆ ಪಾತ್ರರಾದ ವ್ಯಕ್ತಿಯಾಗಿಯೇ ಇಂಗ್ಲೆಂಡಿಗೆ ಬಂದರು. ಈಗವರು ಗುಲಾಮೀರಾಷ್ಟ್ರದ ಸಾಮಾನ್ಯ ಪ್ರಜೆಯಲ್ಲಿ, ಬದಲಿಗೆ ಅಪಾರ ಪ್ರತಿಭೆಯುಳ್ಳ ಪರಮೋತ್ಕøಷ್ಟ ಜ್ಞಾನಿ. ಇಂಗ್ಲೆಂಡು ಅಪಾರ ಗೌರವದಿಂದ ಅವರನ್ನು ಸ್ವೀಕಾರ ಮಾಡಿತು.
ಲಂಡನ್ನಿನ ಪ್ರಿನ್ಸೆಸ್ ಹಾಲ್‍ನಲ್ಲಿ ಸ್ವಾಮಿಜೀ ಮಾಡಿದ ಭಾಷಣದಿಂದ ಜನ ಬೆಕ್ಕಸಬೆರಗಾದರು. ‘ಸ್ಟ್ಯಾಂಡರ್ಡ್’ ಪತ್ರಿಕೆ “ರಾಮ್‍ಮೋಹನರಾಯರ ನಂತರದ ದಿನಗಳಲ್ಲಿ ಕೇಶವಚಂದ್ರಸೇನರನ್ನು ಬಿಟ್ಟರೆ ‘ಪ್ರಿನ್ಸೆಸ್ ಹಾಲ್’ನಲ್ಲಿ ಮಾತನಾಡಿದ ವಿವೇಕನಂದರಿಗಿಂತ ಹೆಚ್ಚು ಸ್ವಾರಸ್ಯಕರವಾಗಿ ಮಾತನಾಡುವ ಮತ್ತೊಬ್ಬ ಭಾರತೀಯ ಇಂಗ್ಲಿಷ್ ವೇದಿಕೆಯ ಮೇಲೆ ಕಾಣಿಸಿಕೊಂಡಿಲ್ಲ” ಎಂದು ಬರೆಯಿತು. ವೆಸ್ಟ್ ಮಿನಿಸ್ಟರ್ ಗೆಜೆಟ್ ಪತ್ರಿಕೆಯ ಪ್ರತಿನಿಧಿ ಸ್ವಾಮಿಜೀಯವರ ಸಂದರ್ಶನದ ಕೊನೆಯಲ್ಲಿ “ಮನುಷ್ಯರಲ್ಲೆಲ್ಲ ಅತ್ಯಂತ ಸ್ವಂತಿಕೆಯಿಂ ಕೂಡಿದ ವ್ಯಕ್ತಿಯೊಬ್ಬರನ್ನು ಭೇಟಿಮಾಡಿದ ಹೆಮ್ಮೆಯಿಂದ ಬೀಳ್ಕೊಂಡೆ’’ ಎಂದು ಯದ್ಗರಿಸಿದ್ದ.
ಸ್ವಾಮಿಜೀಯವರ ಕುರಿತಂತೆ ಈ ರೀತಿ ಸದಭಿಪ್ರಾಯಗಳು ಹೊರಬರುತ್ತಿದ್ದಂತೆ ಅವರು ಜನಮಾನಸದಲ್ಲಿ ಭಾರತೀಯತೆಯ ಛಾಪು ಒತ್ತಲಾರಂಭಿಸಿದ್ದರು. ಸಾರ್ವಜನಿಕ ಸಭೆಯಲ್ಲಿ ಇಂಗ್ಲೆಂಡಿನ ಸಂಪತ್ಸಮೃದ್ಧಿಯನ್ನೂ ಘೋರ ಯುದ್ಧಗಳನ್ನೂ ಧಾರ್ಮಿಕ ಅಸಹಿಷ್ಣುತೆಗಳನ್ನೂ ಟೀಕಿಸಿದುದಲ್ಲದೇ ನಮ್ರ ಸ್ವಭಾವದ ಹಿಂದು ಇಂತಹ ಸಂಸ್ಕøತಿಯನ್ನು ಎಂದಿಗೂ ಅಪ್ಪಿಕೊಳ್ಳಲಾರನೆಂದು ಘಂಟಾಘೋಷವಾಗಿ ಸಾರಿದರು. ಪ್ರಜ್ಞಾವಂತೆ, ಬ್ರಿಟಿಷರಿಗೆ ತಮ್ಮ ಮೇಲೇ ಅಸಹ್ಯ ಹುಟ್ಟುವಂತಹ ಮಾತುಗಳವು. ಸ್ವಾಮಿಜೀ ಬಿಳಿಯರ ಅಹಂಕಾರವನ್ನು ಅಗಸ ಬಟ್ಟೆಯನ್ನು ಕಲ್ಲಿನ ಮೇಲೆ ಬೀಸಿ ಒಗೆವಂತೆ, ಒಗೆದು ಬಿಸಾಡಿದರು. ಹೀಗಾಗಿ ಅವರ ಉಪನ್ಯಾಸಗಳಲ್ಲಿ, ತರಗತಿಗಳಲ್ಲಿ ಸಮಾಜದ ಉನ್ನತವರ್ಗದ ಮಹಿಳೆಯರೂ ನೆಲದ ಮೇಲೆ ಕಾಲು ಮಡಿಸಿಕೊಂಡು ಕುಳಿತಿರುತ್ತಿದ್ದರು! ಕೆಲವೊಮ್ಮೆಯಂತೂ ರಾಜಮನೆತನದವರೂ ವೇಷ ಮರೆಸಿಕೊಂಡು ಸ್ವಾಮಿಜೀಯವರ ಮಾತು ಕೇಳಲು ಬಂದು ಕುಳಿತಿರುತ್ತಿದ್ದುದುಂಟು. ಮಾರುವೇಷವೇಕೆಗೊತ್ತೇ? ಗುಲಾಮೀ ರಾಷ್ಟ್ರದವನೊಬ್ಬನ ಮಾತು ಕೇಳಲು ರಾಜಮನೆತನದವರೇ ಬಂದುದು ತಿಳಿದರೆ ಅವಮಾನವೆಂಬ ಕಾರಣಕ್ಕಷ್ಟೇ!!
ಸ್ವಾಮಿಜೀಯವರ ಸೋದರ ಸಂನ್ಯಾಸಿಗಳು ವಿದೇಶದಲ್ಲಿನ ಕಾರ್ಯಕ್ಕೆ ಜೊತೆಯಾಗಲು ಹಿಂಜರಿದಾಗ ಪತ್ರ ಬರೆದ ಸ್ವಾಮಿಜೀ, “ನನ್ನ ಪಾಡಿಗೆ ನಾನೊಬ್ಬನೇ ಎಲ್ಲವನ್ನೂ ಮಾಡಿಕೊಳ್ಳುತ್ತೇನೆ. ನಾನು ಸಾಧಿಸಬೇಕಾದ ಕಾರ್ಯೋದ್ದೇಶವೊಂದಿದೆ. ಅದನ್ನು ಏಕಾಂಗಿಯಾಗಿಯೇ ಸಾಧಿಸುತ್ತೇನೆ” ಎಂದಿದ್ದರು. ಆ ಕಾರ್ಯೋದ್ದೇಶವೇನೆಂಬುದು ಮಾತ್ರ ಸ್ವಾಮಿಜಿಗೇ ಗೊತ್ತಿತ್ತು. ಅದು ಬರಿಯ ವೇದಾಂತಪ್ರಸಾರವಷ್ಟೇ ಆಗಿದ್ದರೆ ಅಮೆರಿಕದಲ್ಲಿ ಮಾಡಿದಂತೆ ಸಂಸ್ಥೆಯೊಂದನ್ನು ಕಟ್ಟಿ ಸುಮ್ಮನಾಗಿಬಿಡಬಹುದಿತ್ತು. ಸ್ವಾಮಿಜೀಯವರ ಮನೋಗರ ಬೇರೆಯೇ ಇತ್ತು. ಶತ್ರುವಿನ ನಾಡಿನಲ್ಲಿ ಭವಿಷ್ಯದ ಹೊರಾಟಕ್ಕೆ ಪೀಠಿಕೆ ಬರೆಯಹೊರಟ್ಟಿದ್ದರು, ಸ್ವಾಮಿಜೀ. ಯಾವ ಯೂರೋಪು ನಮ್ಮನ್ನು ಗುಲಾಮರನ್ನಾಗಿಸಿತ್ತೋ ಅದೇ ಯೂರೋಪಿನಲ್ಲಿ ಭಾರತದ ಸ್ವಾತಂತ್ಯ್ರ ಸಂಗ್ರಾಮಕ್ಕೆ ಶಕ್ತಿ ತುಂಬಬಲ್ಲವರನ್ನು ಅರಸುತ್ತಿತ್ತು ಸ್ವಾಮಿಜೀಯವರ ಹೃದಯ. ಇಟಲಿಯ ಮಹಾನ್ ಕ್ರಾಂತಿಕಾರಿ ಮೆಟ್ಸಿನಿ ಹೇಳುತ್ತಾನೆ: “ಮಹಾನ್ ಕ್ರಾಂತಿಗಳೆಲ್ಲ ಬಂದೂಕಿನ ನಳಿಕೆಗಳಿಂದಾಗುವಂತಹುದಲ್ಲ, ಸಿದ್ಧಾಂತಗಳಿಂದಲೇ ನಡೆಯುವಂಥದ್ದು. ಮೊದಲು ಮಾನಸಿಕವಾಗಿ ಅನಂತರ ಕಣ್ಣೆದುರು ನಡೆಯುವ ಕದನ ಅದು.” ಸ್ವಾಮಿಜೀ ಕ್ರಾಂತಿಗೆ ಮಾನಸಿಕವಾಗಿ ಜನರನ್ನು ಸಿದ್ಧಗೊಳಿಸುತ್ತಿದ್ದರು!
ಅರವಿಂದರು ‘ಕರ್ಮಯೋಗಿನ್’ನಲ್ಲಿ ಸಮರ್ಥವಾಗಿ ಹೇಳಿದ್ದರು: “ಗುರುವಿನ ಆದೇಶದಂತೆ ವಿದೇಶಕ್ಕೆ ಹೋದ ವಿವೇಕಾನಾಂದರು, ತಮ್ಮೆರಡು ಕೈಗಳಿಂದ ಜಗತ್ತನ್ನು ಪರಿವರ್ತಿಸಿಯೇ ತೀರುವೆನೆಂಬ ವಿಶ್ವಾಸ ತೋರಿದ್ದರು. ಇದು ಭಾರತ ಬದುಕುಳಿಯಲ್ಲಿಕ್ಕಾಗಿ ಅಲ್ಲ, ಜಗತ್ತನ್ನು ಗೆಲ್ಲಲಿಕ್ಕೆಂದೇ ಇರುವಂಥದ್ದೆಂಬುದರ ಮೊದಲ ಸಂಕೇತವಾಗಿತ್ತು.”
ಅಕ್ಷರಶಃ ಸತ್ಯ. ಪಶ್ಚಿಮದಲ್ಲಿ ಸ್ವಾಮಿಜೀಯವರ ಗೆಲವು ಯೂರೋಪ್-ಅಮೆರಿಕೆಯಲ್ಲಿ ಭಾರತದ ಕುರುತಂತಹ ಧೋರಣೆಯನ್ನು ಬದಲಾಯಿಸಿತ್ತೆಂಬುದು ಎಷ್ಟು ಸತ್ಯವೋ, ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸತ್ತೆನ್ನವುದೂ ಅಷ್ಟೇ ಸತ್ಯ. ಭಾರತೀಯರಲ್ಲಿ ಆಂಗ್ಲರಿಗೂ ಸವಾಲೆಸೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಕಾಕತಾಳೀಯವಾದರೂ 1895 ರಲ್ಲಿ ರಾಜಕುಮಾರ ರಣಜಿ ಮೊದಲ ಬಾರಿಗೆ ಇಂಗ್ಲಿಷ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದು; 1897 ರಲ್ಲಿ ಅತುಲ್‍ಚಂದ್ರ ಚಟರ್ಜೀ ಐ.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು; 1899ರಲ್ಲಿ ಆರ್.ಪಿ. ಪರಾಂಜಪೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ್ದು; 1896ರಲ್ಲಿ ಜಗದೀಶಚಂದ್ರಬೋಸ್ ರೇಡಿಯೋ ವಿಜ್ಞಾನದಲ್ಲಿ ಅಗ್ರಣಿಯಾಗಿದ್ದು- 1901ರಲ್ಲಿ ಸಸ್ಯಶಾಸ್ತ್ರದ ಕುರಿತಂತೆ ಜಗತ್ತು ಬೆರಗಾಗುವಂತೆ ಮಾಡಿದ್ದ; – ಇವೆಲ್ಲ ವಿವೇಕಾನಂದರ ಗೆಲವಿನ ನಂತರವೇ.
ಸ್ವಾಮಿಜೀ ಭಾರತೀಯರಲ್ಲಿ ನವಚೈತನ್ಯ ತುಂಬಿದ್ದರು. ಹೊಸಬಗೆಯ ಸವಾಲುಗಳನ್ನೆದುರಿಸಲು ಅವರನ್ನು ಸಿದ್ಧಗೊಳಿಸಿದ್ದರು. ಅನಂತರದ ದಿನಗಳಲ್ಲಿ ಭಾರತೀಯ ಸ್ವಾತತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಮೇಲೂ ಪ್ರತ್ಯಕ್ಷವಾಗಿ – ಪರೋಕ್ಷವಾಗಿಯಾದರೂ ಸ್ವಾಮಿಜೀಯವರ ಪ್ರಭಾವ ಇದ್ದೇ ಇತ್ತು.

ಚಕ್ರವರ್ತಿ ಸೂಲಿಬೆಲೆ.

Leave a Reply