Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಮಳೆಗೆ ಐದು ಜೀವ ಬಲಿ

ಮಳೆಗೆ ಐದು ಜೀವ ಬಲಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ ರಾಜಧಾನಿಯಲ್ಲಿ ತಾಯಿ-ಮಗಳು ಸೇರಿ ಐವರು ಬಲಿಯಾಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿ ಹೋದರೆ ಇನ್ನಿಬ್ಬರು ಮನೆ ಕುಸಿದು ಕೊನೆಯುಸಿರೆಳೆದಿದ್ದಾರೆ. ಮಳೆ ಆರ್ಭಟಕ್ಕೆ ಜಾನುವಾರುಗಳೂ ತತ್ತರಿಸಿದ್ದು, ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ 15 ಹಸುಗಳು ಹಾಗೂ 6 ಎಮ್ಮೆಗಳು ಮೃತಪಟ್ಟಿವೆ. ಈ ಅನಾಹುತಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನಜೀವನ ಇನ್ನಷ್ಟು ಅಯೋಮಯವಾಗುವ ಲಕ್ಷಣಗಳು ಗೋಚರಿಸಿವೆ. ಮೇಯರ್ ಸಂಪತ್ ರಾಜ್ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕುಸಿದು ಬಿದ್ದ ಗೋಡೆ: ಕುರುಬರಹಳ್ಳಿ 18ನೇ ಅಡ್ಡರಸ್ತೆಯಲ್ಲಿ ಮನೆ ಗೋಡೆ ಕುಸಿದು ಶಂಕರಪ್ಪ, ಕಮಲಮ್ಮ ದಂಪತಿ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿನಗದಲ್ಲಿ ಕೊಟ್ಟಿಗೆ ನೀರು ನುಗ್ಗಿದ್ದರಿಂದ 15 ಹಸುಗಳು ಹಾಗೂ 6 ಎಮ್ಮೆಗಳು ಕೊನೆಯುಸಿರೆಳೆದಿವೆ.

ತಾಯಿ, ಮಗಳು ನೀರುಪಾಲು

ಕುರುಬರಹಳ್ಳಿಯ ಜೆಸಿ ನಗರದ 19ನೇ ಅಡ್ಡರಸ್ತೆಯಲ್ಲಿಯೂ ರಾಜಕಾಲುವೆ ತುಂಬಿ 7-8 ಅಡಿ ನೀರು ಹೊರಬಂದ ಪರಿಣಾಮ ಅಲ್ಲಿಯೇ ಪಕ್ಕದಲ್ಲಿದ್ದ ಮನೆಯಲ್ಲಿನ ತಾಯಿ, ಮಗಳು ನೀರುಪಾಲಾಗಿದ್ದಾರೆ. ತಾಯಿ ಮೀನಾಕ್ಷಿ ಹಾಗೂ ಪುತ್ರಿ ಪುಷ್ಪ ರಾಜಕಾಲುವೆಗೆ ಬಲಿಯಾದ ದುರ್ದೈವಿಗಳು.

ಮೆಟ್ರೋ ಏರಿದ ಅನಂತ್

ಭಾರಿ ಮಳೆಗೆ ಕೇಂದ್ರ ಸಚಿವ ಅನಂತಕುಮಾರ್ ಕೂಡ ತತ್ತರಿಸಿದರು. ಶೇಷಾದ್ರಿಪುರಂ ಬಳಿ 1 ಗಂಟೆಗೂ ಅಧಿಕ ಕಾಲ ಸಚಿವರು ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್​ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬೇಸತ್ತು ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದವರೆಗೂ ನಡೆದೇ ಹೋದ ಸಚಿವರು, ಅಲ್ಲಿಂದ ಲಾಲ್​ಬಾಗ್ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.

ಕೊಚ್ಚಿಹೋದ ಅರ್ಚಕ

ಕುರುಬರ ಹಳ್ಳಿಯ ವೆಂಕಟೇಶಕೃಪಾ ಬಡಾವಣೆಯಲ್ಲಿರುವ ವೆಂಕಟೇಶ್ವರ ದೇವಸ್ಥಾನ ಅರ್ಚಕ ವಾಸುದೇವ್ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ. ದೇವಸ್ಥಾನ ಮುಂಭಾಗದಲ್ಲಿರುವ ಬೃಹತ್ ಮಳೆ ನೀರುಗಾಲುವೆಯನ್ನು ಕ್ಲಾಬರ್ ಕಲ್ಲುಗಳಿಂದ ಮುಚ್ಚಲಾಗಿದ್ದು, ಅದೇ ಮಾರ್ಗದ ಮೂಲಕ ಮನೆಗೆ ತೆರಳಲು ಮುಂದಾದ ಅರ್ಚಕರು ಕಲ್ಲಿನ ಮೇಲೆ ಕಾಲು ಇಟ್ಟಾಗ ಕುಸಿದು ಬಿದ್ದು ಕೊಚ್ಚಿ ಹೋಗಿದ್ದಾರೆ. ತಕ್ಷಣ ಸ್ಥಳೀಯರು ಬಟ್ಟೆ ಕೊಟ್ಟು ಅವರನ್ನು ಮೇಲೆ ಎಳೆದುಕೊಳ್ಳುವ ಪ್ರಯತ್ನ ಮಾಡಿದರಾದರೂ ನೀರು ರಭಸವಾಗಿ ಹರಿದ ಹಿನ್ನೆಲೆಯಲ್ಲಿ ಪ್ರಯತ್ನ ಫಲಪ್ರದವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಮೇಯರ್ ಆರ್. ಸಂಪತ್​ರಾಜ್ ಅರ್ಚಕರ ಶೋಧ ನಡೆಸಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Reply